Wednesday, 21 October 2015

ಸಂಬಂಧ ಬೆಸೆಯುವ ಬನ್ನಿ ಹಬ್ಬ

ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ ಹಬ್ಬವು ಹಳಸಿದ ಸಂಬಂಧಗಳನ್ನು ಬೆಸೆಯುತ್ತದೆ. ಅಲ್ಲದೆ ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ. ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ನಡೆದ ಪವಿತ್ರ ದಿನ, ಪಾಂಡವರು ಅಜ್ಞಾತವಾಸ ಮುಗಿಸಿದ ಪವಿತ್ರ ದಿನವೆಂದು ಐತಿಹ್ಯಗಳು ಹೇಳುತ್ತವೆ. ಪಾಂಡವರು ಅಜ್ಞಾತವಾಸ ಹೋಗುವಾಗ ಕಾಡಿನಲ್ಲಿರುವ ಬನ್ನಿಗಿಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಕಟ್ಟಿ, ಅಜ್ಞಾತವಾಸ ಮುಗಿಸಿದಾಗ ಬನ್ನಿ ಗಿಡವನ್ನು ಪೂಜಿಸಿ, ಶಸ್ತ್ರಾಸ್ತ್ರಗಳನ್ನು ಬಿಡಿಸಿಕೊಂಡ ಪವಿತ್ರ ದಿನವೆಂದು ಹೇಳುತ್ತಾರೆ.
ವಿಜಯದಶಮಿಯಂದು ಬೆಳೆಸು ತುಂಬಿದ ಭೂಮಿ, ಕಾಡನ್ನು ಬಿಟ್ಟು ಊರನ್ನು ಸೇರುವುದೆಂದು ಕೃಷಿಕರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿಕರು ಹಾಗೂ ವ್ಯಾಪಾರಿಗಳು ಆಯುಧಗಳನ್ನು ಪೂಜಿಸಿ, ಬನ್ನಿ ಸಸಿಯನ್ನು ನೆಟ್ಟು, ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳುತ್ತಾರೆ. ಪಾಂಡವರಿಗೆ ಸಂಬಂಧಿಸಿದ ಜನಪದ ಹಾಡು ವಿವರಿಸುವುದು ಹೀಗೆ “ಕಲ್ಲು ಕಡುಬು ಮಾಡಿ, ಮುಳ್ಳು ಸಾವಿಗೆ ಮಾಡಿ, ಬನ್ನಿಯ ಎಲಿಯಾಗೆ ಎಡೆಮಾಡಿ, ಪಾಂಡವರು, ಉಂಡು ಹೋಗ್ಯಾರೊ ವನವಾಸೊ” ಅಂದು ಮಕ್ಕಳು ತಾಯಂದಿರಿಗೆ ಬನ್ನಿ ಮುಡಿಸುವುದರ ಮೂಲಕ ಹಾಗೂ ಹೆಂಡತಿ ಗಂಡನಿಗೆ ಬನ್ನಿ ಮುಡಿಸುವುದರ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.
ರಾಮಾಯಣ ಹಾಗೂ ಮಹಾಭಾರತದ ಎರಡು ಪ್ರಮುಖ ಘಟನಾವಳಿಗಳಿಗೆ ವಿಜಯದಶಮಿ ಸಾಕ್ಷಿಯಾಗಿ, ಮನುಷ್ಯರಲ್ಲಿನ ದುರ್ಗುಣಗಳ ಸಂಹಾರದ ದ್ಯೋತಕವಾಗಿದೆ. ಶಾಕ್ತೇಯರಿಂದ ‘ಅಪರಂಜಿತಾ’ ಎಂದು ಪೂಜೆಗೊಳ್ಳುತ್ತಿದ್ದ ಬನ್ನಿರಾಮಾಯಣ, ಮಹಾಭಾರತದ ಸಂದರ್ಭದಲ್ಲಿ ಮಾನ್ಯತೆ ಪಡೆದಿತ್ತು. ಶ್ರೀ ರಾಮಚಂದ್ರನು ಶಮಿವೃಕ್ಷವನ್ನು ಪೂಜಿಸಿ, ರಾವಣನ ಮೇಲೆ ಯುದ್ಧಕ್ಕೆ ಹೋದನೆಂದು, ವಿರಾಟನ ಗೋಗ್ರಹಣದ ಸಂದರ್ಭದಲ್ಲಿಯು ಅರ್ಜುನನು ಶಮಿದೇವಿಯನ್ನು ಆರಾಧಿಸಿದನೆಂಬ ಉಲ್ಲೇಖಗಳು ಜನಪದ ಮಹಾಕಾವ್ಯಗಳಲ್ಲಿವೆ.
ಪೌರಾಣಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಮಹತ್ವದ ಸ್ಥಾನ ಪಡೆದ ಬನ್ನಿಯು ವಿಜಯದ ಸಂಕೇತವಾಗಿ, ಸಂಬಂಧಗಳನ್ನು ಬೆಸೆಯುವ ಸಾಧನವಾಗಿದೆ. ಬನ್ನಿಯ ಮರವನ್ನು ಉರುವಲಾಗಿ ಉಪಯೋಗಿಸುವುದಿಲ್ಲ. ಹಾಗೆಯೆ ಗಿಡವನ್ನು ವ್ಯಾಪಾರ ಮಾಡುವುದಿಲ್ಲ.ಧಾರ್ಮಿಕವಾಗಿ ಬನ್ನಿ ಮರ ಪವಿತ್ರ ಸ್ಥಾನದಲ್ಲಿದೆ.

ಬನ್ನಿ ಮುಡಿಯುವ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತುಗಳಿವು ↓
" ಬಂಗಾರ ಕೊಟ್ಟು ಬಂಗಾರದ್ಹಾಂಗ ಇರೋಣ್ರಿ... ಕೈ ಹಿಡೀರಿ, ಉಡಿ ಒಡ್ಡರೀ... ಸಾಕು ಅನ್ನುವಷ್ಟು ಬಂಗಾರ ಕೊಡ್ತೀವಿ... ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕಾಗಾಂಗಿಲ್ಲ ನಿಮ್ಮ ಮನಿತನಕ ನೀವು ಹೇಳ್ದ ಕೇಳ್ದ ಬಂಗಾರ ತಂದೀವಿ... ಎಷ್ಟು ಬೇಕು ಅಷ್ಟು ತುಗೊಳ್ರಿ..."

ದಸರಾ ಹಬ್ಬದ ಶುಭಾಶಯಗಳು

No comments:

Post a Comment