Friday, 30 October 2015

ಕನ್ನಡ ಭಾಷೆಯ ಬಗ್ಗೆ ಒಂದಷ್ಟು ಮಾಹಿತಿ.

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

��ಕನ್ನಡದ ಬಗ್ಗೆ ��

✅ಕನ್ನಡ ಪ್ರಪಂಚದಲ್ಲಿಯೇ ಹಳೆಯ ಪ್ರಾಚೀನ ಭಾಷೆಗಳಲ್ಲಿ ಒಂದು.

✅ ಕನ್ನಡಕ್ಕೆ ೨೦೦೦ ಸಾವಿರ ವರ್ಷಗಳಷ್ಟು ಸುದೀರ್ಘ ಇತಿಜಾಸವಿದೆ
    
✅ ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
    
✅ಕನ್ನಡಕ್ಕೆ ಇದುವರೆಗೂ ಸಂದಿರುವುದು 8 ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
   
✅ ಶ್ರೀಯುತ ವಿನೋಭಾ ಭಾವೆ ಅವರು  ಕನ್ಡಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಹೊಗಳಿದ್ದಾರೆ.

✅ಅಷ್ಟೆಲ್ಲಾ ಹೊಗಳುವ ಇಂಗ್ಲೀಷ್'ಗೆ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ರೋಮ್'ನಲ್ಲಿ ಬರೆಯಲಾಗುತ್ತದೆ.
   
✅ ಅಷ್ಟೆಲ್ಲಾ ಹೇಳಿಸಿಕೊಳ್ಳುವ ಹಿಂದಿಗೂ ಕೂಡ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ಪ್ರಾಚೀನ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.
   
✅ ತಮಿಳು ತನ್ನದೇ ಆದ ಲಿಪಿ ಹೊಂದಿದ್ದರೂ ತರ್ಕಬದ್ದವಾಗಿಲ್ಲ. ಕೆಲವು ಅಕ್ಷರಗಳನ್ನು ಬೇರೆಬೇರೆ ರೀತಿಯಾಗಿ ಉಚ್ಚರಿಸಲಾಗುತ್ತದೆ.
   
✅ ಕ್ರಿಸ್ತ ಶಕ ೪೫೦ ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
   
✅ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿಸ್ತಪೂರ್ವ ೨೩೦)
   
✅ ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತಡುವದನ್ನ ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಇಲ್ಲ.
   
✅ಯಾವಾಗ ಕವಿರಾಜಮಾರ್ಗದಲ್ಲಿ 'ಕಾವೇರಿಯಿಂದ ಗೋದಾವರಿವರೆಗಿರ್ಪ' ಅಂಥ ಹೇಳಿದಾಗ ಇಂಗ್ಲೀಷ್ ಇನ್ನು ತೊಟ್ಟಿಲಲ್ಲಿತ್ತು , ಹಿಂದಿಯ ಜನನವೇ ಆಗಿರಲಿಲ್ಲ.
   
✅ 'ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್' (ಯಾವುದನ್ನು ಕುರಿತು ಓದದ ಅವಿದ್ಯವಮ್ಥರು ಕಾವ್ಯ ಬರೆದು ಪ್ರಯೋಗ ಮಾಡುವಷ್ಟು ಬುದ್ದಿವಂತರು ಈ ಕನ್ನಡಿಗರು) ಎಂಬ ಕನ್ನಡಿಗರ ಬಗೆಗಿನ ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಶನ ಕವಿರಾಜಮಾರ್ಗದಲ್ಲಿಯೇ ಹೇಳಲಾಗಿದೆ.
   
✅ ವಿದೇಶಿಯನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
   
✅ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.
   
✅ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.

✅ ಚಂದಸ್ಸು(ಷಟ್ಪದಿ)ನ್ನು ಬೇರಾವ ಭಾಷೆಯಲ್ಲಿ ನೀವು ಕಾಣಲಾರಿರಿ.

��ಕನ್ನಡಿಗರಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ

ಇಂಗ್ಲಿಷ ಕಲಿಯಿರಿ ಆದರೆ ಕನ್ನಡ ಮರೆಯದಿರಿ

��ಸಿರಿಗನ್ನಡಂಗೆಲ್ಗೆ��

*************************************

About Kannada Language:

��Kannada is the third oldest language of World. (After . . . Sanskrit & Greek)
is as old as 2000 years.

��Kannada is 99.99% perfect -logically and scientifically.

��Kannadaigas got 8 Gnana Peetha Awards. Look at other languages . . . Hindi -- 6, Telugu - 2, Malayalam - 3, Tamil - 2.

��Shri VINOBA BHAVE called Kannada script as QUEEN OF WORLD SCRIPTS - "Vishwa LipigaLa RaaNi - Kannada "

��So called International language -- English does not have its own Script. English is written in "ROMAN"

��So called National Language -- Hindi does not have its own script. Hindi is written in "Deva nagari"

��Though Tamil has a script, logically it is imperfect -- as common letters are used for many pronunciations..

��Kannada is as old as 2000 years. You can write what you speak and you can read what you write.

��When " Kaviraja Maarga was written . . ."kaaveriyinda , godaavarivaregirpa ... " by Amogha Varsha Nripathunga, English was incradle & Hindi was not born at all.

��Kannada is the only Indian language for which a foreigner (Kittal) wrote a dictionary (Shabda Kosha)

��Ragale Saahithya can be seen only in Kannada which is of a rare and different kind of literature.

��Number of literature awards KUVEMPU got, was highest among any Indian authors.

��Kannada Chandassu (shatpadis) out pared all other languages.

So Let us have PRIDE in using Kannada . Be proud of being a KANNADIGA.

Forward this to all your friends and let them also be PROUD to be KANNADIGAS.

Monday, 26 October 2015

ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ.

ಸರ್ವರಿಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

ಮಹರ್ಷಿ ವಾಲ್ಮೀಕಿ.
*************
ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೆ ಇಲ್ಲ.

ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಸರ್ಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಾಹದ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯೆ!”

ನಾರದರು ನುಡಿದರು - “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಈ ಸಂವೇದನೆಯಲ್ಲಿ ಆತನ ಕಠೋರ ಹೃದಯ ಕರಗಿತು. ಅವನು ಹೇಳಿದನು – “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು.”

ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ನಿನ್ನಿಂದ ಕೇವಲ ಸಾಕಲ್ಪಡಲು ಮಾತ್ರ ಅಧಿಕಾರಿಗಳಾಗಿರುವರೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ’ ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು.”

ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು!

ತನ್ನ ಕುಟುಂಬದವರ ಮಾತನ್ನು ಕೇಳಿ ರತ್ನಾಕರನ ಹೃದಯಕ್ಕೆ ಆಘಾತವಾಯಿತು. ಅವನ ಅರಿವಿನ ಕಣ್ಣು ತೆರೆಯಿತು. ಅವನು ಬೇಗನೇ ಕಾಡಿಗೆ ಹೋಗಿ ನಾರದರ ಬಂಧನವನ್ನು ಬಿಡಿಸಿ, ವಿಲಪಿಸುತ್ತಾ ಅವರ ಚರಣಗಳಲ್ಲಿ ಕುಸಿದುಬಿದ್ದನು. ಅವನ ಪ್ರಲಾಪದಲ್ಲಿ ಆಳವಾದ ಪಶ್ಚಾತ್ತಾಪ ತುಂಬಿತ್ತು. ನಾರದರು ಅವನಿಗೆ ಧೈರ್ಯಹೇಳಿ ರಾಮನಾಮದ ಉಪದೇಶ ನೀಡಿದರು. ಆದರೆ ಹಿಂದೆ ಮಾಡಿದ ಪಾಪಗಳಿಂದಾಗಿ ಅವನಿಗೆ ರಾಮನಾಮವನ್ನು ಉಚ್ಚರಿಸಲಾಗಲಿಲ್ಲ. ಆಗ ನಾರದರು ಯೋಚಿಸಿ ‘ಮರಾ-ಮರಾ’ ಎಂದು ಜಪಿಸಲು ಹೇಳಿದರು. ಮರ ಅವನಿಗೆ ಪರಿಚಿತವಾದ್ದರಿಂದ ಹಾಗೇ ಜಪಿಸತೊಡಗಿದನು. ಮರಾ-ಮರಾ ಎಂದು ನಿರಂತರ ಹೇಳುವುದರಿಂದ ರಾಮ-ನಾಮದ ಉಚ್ಚಾರವು ಸಹಜವಾಗೆಂಬಂತೆ ಆಯಿತು. ಇದನ್ನೇ ದಾಸರು “ಆ ಮರ ಈ ಮರ ಎಂದು ಧ್ಯಾನಿಸುವಾಗ, ರಾಮ ರಾಮ ಎಂಬ ನಾಮವೇಕಾಯಿತೋ” ಎಂದು ಹಾಡಿರುವುದು.

ನಾರದರಿಂದ ಉಪದೇಶ ಪಡೆದು ರತ್ನಾಕರನು ನಾಮಜಪದಲ್ಲಿ ಮುಳುಗಿಹೋದನು. ಹಲವಾರು ವರ್ಷಗಳವರೆಗೆ ನಾಮಜಪದ ಪ್ರಬಲ ನಿಷ್ಠೆಯಿಂದ ಅವನ ಸಮಸ್ತ ಪಾಪಗಳೂ ತೊಳೆದುಹೋದವು. ಅವನ ಶರೀರದ ಮೇಲೆ ಹುತ್ತ ಬೆಳೆಯಿತು. ಹುತ್ತಕ್ಕೆ ವಲ್ಮೀಕವೆಂದು ಹೇಳುವರು. ದೈವ ಸಾಕ್ಷಾತ್ಕಾರದಿಂದ ವಲ್ಮೀಕದಿಂದ ಹೊರಬಂದ ಕಾರಣದಿಂದ ಅವನ ಹೆಸರು ವಾಲ್ಮೀಕಿ ಎಂದಾಯಿತು.

ಮಹರ್ಷಿಗಳಾದ ವಾಲ್ಮೀಕಿಗಳು ಪ್ರಪಂಚದಲ್ಲಿ ಲೌಕಿಕ ಛಂದಸ್ಸುಗಳ ಆದಿಕವಿಗಳೇ ಆದರು. ಈ ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಬ್ರಹ್ಮನ ಮಡದಿಯಾದ ವಾಗ್ದೇವಿ ತಾನಾಗಿಯೇ ವಾಲ್ಮೀಕಿಯ ನಾಲಿಗೆಯಲ್ಲಿದು ರಾಮಾಯಣವನ್ನು ಹೊರಹೊಮ್ಮಿಸಿದಳು ಎಂಬುದು ಭಕ್ತಿಪೂರ್ಣ ಭಾರತೀಯ ಭಾವವಾಗಿದೆ.

ತಮ್ಮ ಬೋಧನೆಯಿಂದ ಮಹರ್ಷಿಯಾದ ಈ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಒಮ್ಮೆ ನಾರದರು ಆಗಮಿಸಿದರು. ಬಂದ ದೇವರ್ಷಿಗಳನ್ನು ಯಥೋಚಿತವಾಗಿ ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದರು ವಾಲ್ಮೀಕಿ. ಸತ್ಕಾರವಾದ ಮೇಲೆ ತಪೋನಿರತರಾದ ನಾರದರನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಮಹರ್ಷಿಗಳು ಪ್ರಶ್ನಿಸಿದರು - “ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಈ ಲೋಕದಲ್ಲಿ ಇದ್ದರೆ ದಯೆಯಿಟ್ಟು ತಿಳಿಸಿ, ನನಗೆ ಬಹಳ ಕುತೂಹಲವಾಗಿದೆ. ಸ್ವಾಮಿ, ನೀವು ಇದನ್ನು ತಿಳಿಸಲು ಸಮರ್ಥರು – ಅದಕ್ಕೇ ನಾನು ಕೇಳುತ್ತಿದ್ದೇನೆ; ದಯೆಯಿಟ್ಟು ತಿಳಿಸಿ”.

ಈ ಪ್ರಶ್ನೆಯನ್ನು ಕೇಳಿದ ನಾರದ ಸಂತೋಷದಿಂದ ವಾಲ್ಮೀಕಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಸಂಕ್ಷೇಪವಾಗಿ ಶ್ರೀರಾಮಾವತಾರದಿಂದ ಪ್ರಾರಂಭಿಸಿ, ಸೀತಾಕಲ್ಯಾಣ, ಅರಣ್ಯಾಗಮನ, ಪಾದುಕಾ ಪ್ರದಾನ, ಸೀತಾಪಹರಣ, ಸುಗ್ರೀವ ಸಖ್ಯ, ಸೇತುಬಂಧ, ರಾವಾಣಾಧಿಗಳ ನಿಗ್ರಹ, ಅಯೋಧ್ಯೆಯಲ್ಲಿ ಪಟ್ಟಾಭಿಷೇಕದವರೆಗೆ ಶ್ರೀರಾಮ ಕಥೆಯನ್ನು ಹೇಳಿದರು.

ರಾಮನಾಮದ ಮಹಿಮೆಯಿಂದಲೇ ಮಹರ್ಷಿಗಳಾದ ವಾಲ್ಮೀಕಿಗಳಿಗೂ ಶ್ರೀರಾಮನ ಕಥೆಯ ಅನುಭಾವವಾಗಿತ್ತು. ತಮಗೆ ತಿಳಿದಿರುವುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವ ಸಲುವಾಗಿಯೇ ಅವರು ನಾರದರನ್ನು ಕೇಳಿದ್ದರು.

ನಾರದರು ಹೊರಟು ಹೋದಮೇಲೆ ವಾಲ್ಮೀಕಿ ಮಹರ್ಷಿಗಳು ಸ್ನಾನ ಮಾಡಲು ಶಿಷ್ಯನಾದ ಭಾರದ್ವಾಜನೊಡನೆ ತಮಸಾನದೀ ತೀರಕ್ಕೆ ಬರುತ್ತಾರೆ. ನದೀ ತೀರದ ದೃಶ್ಯ ಸುಮನೋಹರವಾಗಿದೆ. ನದಿಯ ನೀರು ಸತ್ಪುರುಷರ ಮನಸ್ಸಿನಂತೆ ತಿಳಿಯಾಗಿದೆ. ಸತ್ಪುರುಷರ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ಅಂತೆಯೇ ಸರೋವರದ ಜಲವೂ ಸ್ಪಟಿಕದಂತೆ ಶುಭ್ರವಾಗಿ ತಿಳಿಯಾಗಿರುವುದನ್ನು ಕಂಡು ವಾಲ್ಮೀಕಿ ಸಂತೋಷ ಪಡುತ್ತಾರೆ. ಸುತ್ತಲೂ ತಿರುಗಿ ಪ್ರಕೃತಿ ಸೌಂದರ್ಯವನ್ನು ನೋಡತೊಡಗುತ್ತಾರೆ.

ಆ ಸಮಯದಲ್ಲಿ ಯಾವನೋ ಒಬ್ಬ ಬೇಡ ಮರದ ಮೇಲೆ ಸಂತೋಷದಿಂದ ಕುಳಿತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ತನ್ನ ಬಾಣದಿಂದ ಹೊಡೆದು ಹಾಕುತ್ತಾನೆ. ಗಂಡು ಹಕ್ಕಿ ಕೆಳಗುರುಳಿದಾಗ ಅದನ್ನು ಕಂಡು ಹೆಣ್ಣು ಹಕ್ಕಿ ವಿಲಪಿಸುತ್ತದೆ. ಈ ದೃಶ್ಯವನ್ನು ಕಂಡು ವಾಲ್ಮೀಕಿ ಮಹರ್ಷಿಗಳಿಗೆ ಸಂಕಟವಾಗಿ ಕೋಪ ಬರುತ್ತದೆ. ಕೋಪದ ಭರದಲ್ಲಿ “ಹೇ ನಿಷಾದ! ಕಾಮಮೋಹಿತವಾಗಿರುವ ಈ ಪಕ್ಷಿದ್ವಯರಲ್ಲಿ ಗಂಡು ಹಕ್ಕಿಯನ್ನು ಕೊಂದೆಯಾದ ಕಾರಣ ನೀನು ಬಹುಕಾಲ ಬದುಕುವುದು ಬೇಡ” ಎಂದು ಶಪಿಸುತ್ತಾರೆ.

ಶಪಿಸಿದ ನಂತರ ಜಿತಕ್ರೋಧರಾಗಿರಬೇಕಾದ ತಮ್ಮಿಂದ ಶಾಪ ಹೊರಹೊಮ್ಮಿತಲ್ಲಾ ಎಂದು ಕಳವಳ ಪಡುತ್ತಾರೆ. ಸ್ನಾನ-ಅಹ್ನೀಕಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಬಂದು ತಾವು ಹೇಳಿದ ಶ್ಲೋಕವನ್ನೇ ಮತ್ತೆ ಮತ್ತೆ ಧ್ಯಾನಿಸತೊಡಗುತ್ತಾರೆ. ಅದೇ ಸಮಯಕ್ಕೆ ಬ್ರಹ್ಮದೇವರು ವಾಲ್ಮೀಕಿಯ ಬಳಿ ಬರುತ್ತಾರೆ.

ಚಿಂತಾಕ್ರಾಂತರಾಗಿರುವ ಋಷಿವರ್ಯರನ್ನು ಕಂಡು “ಚಿಂತಿಸುವ ಕಾರಣವಿಲ್ಲ. ನಿಮ್ಮ ಬಾಯಿಂದ ಸಾಕ್ಷಾತ್ ವಾಣಿಯೇ ಆ ಶ್ಲೋಕವನ್ನು ನುಡಿಸಿದ್ದಾಳೆ. ಇದು ನೀವು ರಚಿಸುವ 24,000 ಶ್ಲೋಕವುಳ್ಳ ರಾಮಾಯಣ ಕಾವ್ಯಕ್ಕೆ ನಾಂದೀ ಶ್ಲೋಕವಾಗಿ, ಮಂಗಳ ಶ್ಲೋಕವಾಗಿ ಪರಿಣಮಿಸುತ್ತದೆ” ಎಂದು ನುಡಿದರು.

ವಾಲ್ಮೀಕಿ ಮಹರ್ಷಿಗಳ ಬಾಯಿಂದ ಹೊರಟ ಶ್ಲೋಕವಾದರೋ ಹೀಗಿತ್ತು.
“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”

“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಮೇಲ್ನೋಟಕ್ಕೆ ತೋರಿ ಬರುವ ಅರ್ಥ ಇದು. ಈ ಶ್ಲೋಕ ಶಾಪರೂಪವಾಗಿ ಹೊರಬಂದಿತು. ಆದರೆ ಅದು ಶಾಪವಾಗಿರದೆ ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಹೊರಹೊಮ್ಮಿದ್ದನ್ನು ಕಂಡು ವಾಲ್ಮೀಕಿಗೇ ಅಚ್ಚರಿಯಾಗುತ್ತದೆ”

ಅದನ್ನೇ ಬ್ರಹ್ಮ ವಾಲ್ಮೀಕಿಗೆ ಸಮಾಧಾನ ಮಾಡುತ್ತಾ “ಇದು ಮಂಗಳ ಶ್ಲೋಕ ಎಂದು ಹೇಳಿದ್ದು. ಈ ಶ್ಲೋಕಕ್ಕೆ ಅನೇಕ ಜ್ಞಾನಿಗಳು ವ್ಯಾಖ್ಯಾನ ಮಾಡಿದ್ದಾರೆ. “ಮಾ” ಶಬ್ದ ಲಕ್ಷ್ಮಿಗೆ ಅನ್ವಯಿಸುತ್ತದೆ. ಲಕ್ಮೀಸಮೇತ ನಾರಾಯಣ ಸ್ವರೂಪ ಶ್ರೀರಾಮ, ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು ಕೊಂದೆಯಾದ್ದರಿಂದ ನೀನು “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು. ಅದುವರೆಗೆ ತಾವು ಕೇಳಿದ ರಾಮಾಯಣ ಕಥಾನಾಯಕ ಶ್ರೀರಾಮನನ್ನು ಕುರಿತು, ಮಂಗಳಾಶೀರ್ವಾದ ಮಾಡುತ್ತಿರುವ ಶ್ಲೋಕವಾಗಿದೆ ಇದು.

ಕ್ರೌಂಚಪಕ್ಷಿಗಳೇ ರಾವಣ ಮಂಡೋದರಿಯ ಪ್ರತೀಕ. ಆ ಬೇಡನೇ ಶ್ರೀರಾಮ. ಕಾಮ ಮೋಹಿತವಾದ ಕ್ರೌಂಚ ಪಕ್ಷಿ ಎಂದರೆ ಕಾಮಿಯಾದ ರಾವಣ ಎಂದರ್ಥ. ಅಂಥ ಕ್ರೌಂಚ ಪಕ್ಷಿಯ ಹೊಡೆದ ಬೇಡನೇ ಶ್ರೀರಾಮ. “ರಾವಣನಿಗ್ರಹ ಮಾಡಿದ ರಾಮ! ನೀನು ಶಾಶ್ವತವಾಗಿ ಬಾಳುವಂಥವನಾಗು” ಎಂದು ರಾಮನಿಗೆ ಮಂಗಳಾಶೀರ್ವಾದ ಮಾಡುವ ಶ್ಲೋಕ ಇದು.

“ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” ಎಂಬುದಾಗಿ ಬ್ರಹ್ಮದೇವರು ವಾಲ್ಮೀಕಿಯನ್ನು ಅನುಗ್ರಹಿಸಿದರಂತೆ

“ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು – ಅವು ರಹಸ್ಯವೇ ಆದರೂ –ವೇದ್ಯವಾಗಲೀ” ಎಂದು ಬ್ರಹ್ಮರು ವಾಲ್ಮೀಕಿಯನ್ನು ಹರಸಿ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿದರು. ಬ್ರಹ್ಮ ದೇವರು ಹೊರಟು ಹೋದಮೇಲೆ ಧರ್ಭೆಯ ಆಸನದಲ್ಲಿ ಕುಳಿತು ವಾಲ್ಮೀಕಿ ಧ್ಯಾನಾಸಕ್ತರಾದರು. ಬ್ರಹ್ಮದೇವನ ಅನುಗ್ರಹದಿಂದ ವಾಗ್ದೇವಿಯಿಂದ ಪ್ರೇರಿತವಾಗಿ ತಮಗೆ ತಾವೇ ಎಲ್ಲಾ ದೃಶ್ಯಗಳೂ ಒಂದಾದ ಮೇಲೊಂದು ಮನಃಪಟಲದಲ್ಲಿ ಕಂಡುಬರುತ್ತಿರುವಂತೆ ವಾಲ್ಮೀಕಿ 24,000 ಶ್ಲೋಕಗಳುಳ್ಳ ಶ್ರೀಮದ್ರಾಮಾಯಣವನ್ನು ರಚಿಸಿದರು. ಇದು ಇತಿಹಾಸ – ಅಂದರೆ ನಡೆದದ್ದನ್ನು ನಡೆದಂತೆ ಹೇಳುವ ಕಾವ್ಯ ಎನಿಸಿಕೊಂಡಿತು.

ರಾಮಾಯಣದ ರಚನೆಯೇನೋ ಆಯಿತು. ಆದರೆ ಅದರ ಪ್ರಚಾರ ಹೇಗಾಗುವುದೋ ಎಂಬ ಚಿಂತೆ ವಾಲ್ಮೀಕಿ ಮಹರ್ಷಿಗಳನ್ನು ಕಾಡುತ್ತಿತ್ತು. ಆ ವೇಳೆಗೆ ಸರಿಯಾಗಿ ಚಂದ್ರ ಸೂರ್ಯರಂತೆ ಅಲ್ಲಿಗೆ ಕುಶ ಲವರು ಬಂದು ವಾಲ್ಮೀಕಿಯ ಚರಣಗಳಿಗೆ ನಮಿಸಿದರು. ರಾಮಾಯಣವನ್ನು ರಾಮನ ಕುವರರಾದ ಕುಶ ಲವರಿಗೆ ವಾಲ್ಮೀಕಿ ಉಪದೇಶಿಸಿದರು. ಅವರು ಮೊದಲು ಋಷಿಗಳ ಸಮೂಹದಲ್ಲಿ ರಾಮಾಯಣವನ್ನು ಗಾನ ಮಾಡಿದರು. ರಸಿಕರಾದ ಋಷಿಗಳೆಲ್ಲಾ ಮಧುಪಾನ ಮಾಡಿದವರಂತೆ ರಾಮಾಯಣದ ಮಧುವನ್ನು ಆಸ್ವಾದಿಸಿದರು. ತುಷ್ಟರಾದರು. ಎಲ್ಲ ಋಷಿಗಳೂ ಮುದದಿಂದ ಕುಮಾರರಿಬ್ಬರನ್ನೂ “ಚಿರಾಯುಗಳಾಗಿ” ಎಂದು ಹರಸಿದರು.

ಅಷ್ಟರಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ಶ್ರೀರಾಮರಿಂದ ಅಶ್ವಮೇಧ ಯಾಗಕ್ಕೆ ದಯಮಾಡಿಸುವಂತೆ ಕರೆ ಬಂದಿತು. ಆಗ ಅವರು ತಮ್ಮೊಂದಿಗೆ ಕುಶ ಲವರನ್ನೂ ಕರೆದೊಯ್ದರು. ರಾಮಾಯಣದ ಗಾನರೂಪಕ ಶ್ರೀರಾಮನ ಅಶ್ವಮೇಧ ಮಹಾಮಂಟಪದಲ್ಲಿ ಕಿಕ್ಕಿರಿದ ಜನಸ್ತೋಮದ ಇದಿರು ನಡೆಯಿತು. ಇಂದ್ರ ಅಗ್ನಿಯಂತೆ ಶೋಭಿಸುತ್ತಿರುವ ಕುಶ ಲವರು ಸುಶ್ರಾವ್ಯವಾದ ಕಂಠದೊಡನೆ ಮಧುರವಾದ ವೀಣಾನಾದ ಜೊತೆಗೂಡುತ್ತಿದ್ದಂತೆ ರಾಮಾಯಣವನ್ನು ಗಾನ ಮಾಡಿದರು. ಎಲ್ಲರೂ ಕೇಳಿ ಮೆಚ್ಚಿದರು. ಸಿಂಹಾಸನದಲ್ಲಿ ಕುಳಿತಿದ್ದ ಶ್ರೀರಾಮರು ರಾಮಾಯಣದ ಮಾಧುರ್ಯಕ್ಕೆ ಮನಸೋತವರಾಗಿ ಮೆಲ್ಲ ಮೆಲ್ಲಗೆ ತೆವಳುತ್ತಾ ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಬಂದು ಕುಳಿತರಂತೆ. ವಸಿಷ್ಠರು “ಇದೇನು, ರಾಮ? ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆ” ಎನಲು, ಶ್ರೀರಾಮರು “ಇದನ್ನು ನಾನು ಮೆಚ್ಚುಗೆಯಿಂದ ಕೇಳುತ್ತಿರುವುಡು ನನ್ನ ಕಥೆ ಎಂದಲ್ಲ, ಸೀತೆಯ ಕಥೆ ಎಂದು” ಎಂದು ನುಡಿದರಂತೆ.

ಹೀಗೆ ವಾಲ್ಮೀಕಿ ಮಹರ್ಷಿಗಳ ರಾಮಾಯಣದ ಪ್ರಚಾರ ನಡೆಯಿತು. ಕುಶ ಲವರು ಶ್ರೀರಾಮನ ಸಮ್ಮುಖದಲ್ಲಿ ರಾಮಾಯಣವನ್ನು ಗಾನ ಮಾಡತೊಡಗಿದರು. ಮುಂದೆ ಅದು ಜನಪದದಲ್ಲಿ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ, ವಿವಿಧ ಭಾಷೆಗಳಲ್ಲಿ ಹರಿಯುತ್ತಲೇ ಇದೆ. ಹೀಗೆ ಮಹರ್ಷಿ ವಾಲ್ಮೀಕಿ ಮತ್ತು ಅವರು ಮಾಡಿದ ಕೆಲಸ ಶ್ರೀರಾಮನ ಕೀರ್ತಿಯಷ್ಟೇ ಅಜರಾಮರವಾದದ್ದು. ಈ ವಾಲ್ಮೀಕಿ ಎಂಬ ಶ್ರೇಷ್ಠತೆಗೆ, ಮಹಾನ್ ಶಕ್ತಿಗೆ, ದಿವ್ಯ ಭಾರತೀಯ ಪರಂಪರೆಗೆ ಭಕ್ತಿಯಿಂದ ವಂದಿಸೋಣ.

ಧನ್ಯವಾದಗಳು.

Saturday, 24 October 2015

ಮಕ್ಕಳ ಮೋಹರಂ ನೋಡಲು ಬಲು ಚೆನ್ನ.

ಮಕ್ಕಳ ಮೋಹರಂ ನೋಡಲು ಬಲು ಚೆನ್ನ.

ಮೊಹರಂ ಕರ್ನಾಟಕದ ಬಹುಭಾಗಗಳಲ್ಲಿ ಆಚರಣೆಗೊಳ್ಳುವ ವರ್ಣನಾತ್ಮಕ ಹಬ್ಬ. ಹಲವು ಕಡೆ ಧರ್ಮ ಜಾತಿಗಳ ಹಂಗು ತೊರೆದು ಈ ಆಚರಣೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ. ಮೂಲತಃ ಇದು ಶೋಕದ ಮೂಲಕ ಹುತಾತ್ಮರ ನೆನಪಿಸಿಕೊಳ್ಳುವ ಆಚರಣೆ. ಆದರೆ ಇದು ಕಾಲಾನಂತರದಲ್ಲಿ ಸಂಭ್ರಮದ ಆಚರಣೆಯಾಗಿ ಬದಲಾಗಿದೆ.
ಮೊಹರಂ ಕಡೆಯ ದಿನದ ನಂತರದ ವಾರ ಚಿಕ್ಕ ಮೊಹರಂ ಎನ್ನುವ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಮರಿ ಮೊಹರಂ ಅಂತಲೂ, ಚಿಕ್ಕ ಜಲದಿ ಅಂತಲೂ ಕರೆಯುತ್ತಾರೆ. ಇದು ಮಕ್ಕಳದೇ ಮೊಹರಂ. ಮಕ್ಕಳೇ ದೇವರು ಕೂರಿಸಿ, ಮಕ್ಕಳೇ ಪೂಜಿಸಿ, ಕೊನೆಗೆ ಅವರೇ ದೇವರನ್ನು ನೀರಿಗೆ ಹಾಕುವಂತಹ ಆಚರಣೆ. ನಿಜಕ್ಕೂ ಮಕ್ಕಳು ಈ ಹಬ್ಬದಲ್ಲಿ ಅತ್ಯಂತ ಖುಷಿ ಮತ್ತು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

ಮೊಹರಂ ಹಬ್ಬದ ಲಕ್ಷಣಗಳು ಮಕ್ಕಳು ಸಹಜವಾಗಿ ಭಾಗವಹಿಸುವಂತೆ ಮಾಡುತ್ತವೆ. ಅದಕ್ಕೆ ಕಾಕತಾಳೀಯವಾಗಿ ಚಾರಿತ್ರಿಕ ಸಂಗತಿಗಳು ಇಲ್ಲದಿಲ್ಲ. ಔರಂಗಜೇಬನ ಬಗ್ಗೆ ಇಂಥದ್ದೊಂದು ಐತಿಹ್ಯವಿದೆ. ಔರಂಗಜೇಬನು ಶೋಕಾಚರಣೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಬೇಡ ಎಂದು ನಿಷೇದಾಜ್ಞೆ ಹೊರಡಿಸುತ್ತಾನ. ಇದಾದ ಒಂದು ವಾರದ ನಂತರ ಔರಂಗಜೇಬನು ರಾಜ ಪರಿವಾರದ ಜತೆ ಹೊರಗೆ ಹೊರಟಾಗ, ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದರಂತೆ, ಆ ಚಿತ್ರ ರಾಜನಿಗೆ ರಣರಂಗದಂತೆಯೂ, ಮಕ್ಕಳು ಆಟವಾಡುವುದು ಯುದ್ಧದ ಸನ್ನಿವೇಷದಂತೆಯೂ, ರಕ್ತ ಚೆಲ್ಲಾಡಿ ರುಂಡ ಮುಂಡಗಳು ಬಿದ್ದಿರುವಂತೆ ಕಂಡು ಬೆಕ್ಕಸ ಬೆರಗಾದನಂತೆ.
ಔರಂಗಜೇಬನು ಆಶ್ಚರ್ಯವಾಗಿ ‘ಇದೇನು ನನಗೆ ಗೊತ್ತಿಲ್ಲದೆ ಯುದ್ಧವೊಂದು ನಡೆಯುತ್ತಿದೆ’ಎಂದು ಮಂತ್ರಿಗಳನ್ನು ಕೇಳಿದ. ಮಂತ್ರಿಗಳಿಗೆ ಆಟದ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣುತ್ತಿತ್ತು. ಆಗ ಅವರುಗಳು ಅಚ್ಚರಿಗೊಂಡು ‘ಪ್ರಭುಗಳೆ ನಮಗೆ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣಿಸುತ್ತಿದೆ. ಇದೇನು ನೀವು ಹೀಗೆ ಹೇಳುತ್ತೀರಿ’ ಎನ್ನುತ್ತಾರೆ. ಆಗ ರಾಜನು ವಿಚಲಿತವಾಗಿ ಅರಮನೆಗೆ ಹೋಗಿ ಮಂತ್ರಿಗಳನ್ನು ಕರೆಸಿ, ಹೀಗೆ ಕಾಣಲು ಕಾರಣವೇನು ಎಂದು ಕೇಳಿದಾಗ, ಇದು ಮೊಹರಂ ಹಬ್ಬವನ್ನು ನಿಷೇದಿಸಿದ್ದರ ಪರಿಣಾಮವಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ.

ಇದನ್ನರಿತ ಔರಂಗಜೇಬನು ಮತ್ತೆ ಮೊಹರಂ ಆಚರಿಸುವಂತೆ ಆಜ್ಞೆ ಹೊರಡಿಸಲು ಸಿದ್ದವಾಗುತ್ತಾನೆ. ಆಗ ಮಂತ್ರಿಗಳು ಪ್ರಭುಗಳೆ ಮೊಹರಂ ನ್ನು ಯಾವಾಗೆಂದರೆ ಆವಾಗ ಮಾಡಲು ಬರುವುದಿಲ್ಲ, ಈಗ ಮೊಹರಂ ಹಬ್ಬವನ್ನು ಮಾಡಲು ಆಗದು, ಬೇಕಾದರೆ ಮಕ್ಕಳಿಗಾಗಿ ಚಿಕ್ಕ ಮೊಹರಂ ಎಂದು ಮಾಡಬಹುದು ಎಂದು ಸಲಹೆ ನೀಡುತ್ತಾರೆ. ರಾಜ ಹಾಗೆಯೆ ಆಗಲಿ ಎಂದನಂತೆ. ಅಂದಿನಿಂದ ರಾಜಾಜ್ಞೆಯಂತೆ ಮಕ್ಕಳ ಮೊಹರಂ ಚಾಲ್ತಿಗೆ ಬಂತಂತೆ. ಇದೊಂದು ಐತಿಹ್ಯವಷ್ಟೆ. ಆದರೆ ಇದು ಮಕ್ಕಳ ಮೊಹರಂಗೆ ಒಂದು ಚಾರಿತ್ರಿಕ ಘಟನೆಯನ್ನು ಜೋಡಿಸುತ್ತದೆ. ಕರ್ನಾಟಕದ ಬಹುಭಾಗಗಳಲ್ಲಿ ಈಗಲೂ ಮಕ್ಕಳ ಮೊಹರಂ ಆಚರಣೆಯಲ್ಲಿದೆ.
ಅನೇಕ ಜಿಲ್ಲೆಯಲ್ಲಿ ಮೊಹರಂ ಹಬ್ಬದಲ್ಲಿ ಬೇಡರಕಣ್ಣಪ್ಪನ ವೇಷ ಹಾಕುವ ಪರಂಪರೆ ಇದೆ. ಇಲ್ಲಿ ಬೇಡರ ಕಣ್ಣಪ್ಪನ ವೇಷದಾರಿ ಬೆನ್ನಿಗೆ ಮಗುವೊಂದನ್ನು ಕಟ್ಟಿಕೊಂಡು, ಎದುರಿನ ಹುಲಿಗಳನ್ನು ಕತ್ತಿ ಹಿಡಿದು ಹೆದರಿಸುತ್ತಿರುವ ಕುಣಿತವೊಂದಿದೆ. ಅದು ಯಾಕೆಂದು ವಿಚಾರಿಸಿದರೆ ಸಿಕ್ಕ ಕಥನ ಕುತೂಹಲ ಮೂಡಿಸುವಂತಿದೆ.

ಕರ್ಬಲಾದಲ್ಲಿ ಯುದ್ಧ ನಡೆದು ಹುಸೇನನ ಮಗುವೊಂದು ಯುದ್ಧದಲ್ಲಿ ಯಜೀದನ ಕಡೆಯ ಸೈನಿಕರಿಂದ ತಪ್ಪಿಸಿಕೊಂಡು ಕಾಡಲ್ಲಿ ಓಡಿ ಬರುತ್ತದೆಯಂತೆ, ಆಗ ಕಾಡಲ್ಲಿ ಬೇಟೆಯಾಡಿಕೊಂಡಿರುವ ಬೇಡರ ಕಣ್ಣಪ್ಪನು ಆ ಮಗುವನ್ನು ಎತ್ತಿಕೊಂಡು ನೀರು ಕುಡಿಸುತ್ತಾನಂತೆ, ಅಷ್ಟೊತ್ತಿಗೆ ಬೆನ್ನಟ್ಟಿಕೊಂಡು ಬಂದ ಯಜೀದನ ಸೈನಿಕರು ಮಗುವನ್ನು ಬಿಟ್ಟುಕೊಡು ಎಂದು ಕೇಳುತ್ತಾರೆ. ಇದನ್ನರಿತ ಬೇಡರ ಕಣ್ಣಪ್ಪ ಮಗುವನ್ನು ಕೊಡಲು ನಿರಾಕರಿಸಿ, ಈ ಮಗು ನನ್ನ ಆಶ್ರಯದಲ್ಲಿದೆ ಹಾಗಾಗಿ ಈ ಮಗುವನ್ನು ರಕ್ಷಿಸಬೇಕಾದುದು ನನ್ನ ಧರ್ಮ. ನಾನು ನಿಮ್ಮೊಂದಿಗೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಆಗ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಅವರೊಂದಿಗೆ ಕಾದಾಡಿ ಮಗುವನ್ನು ರಕ್ಷಿಸಿದನಂತೆ. ಈ ನೆನಪನ್ನು ಈಗಿನ ಬೇಡರಕಣ್ಣಪ್ಪನ ವೇಷ, ಕುಣಿತ ಅಡಗಿಸಿಕೊಂಡಂತಿದೆ. ಕರ್ನಾಟಕದಲ್ಲಿ ಬೇಡ ಸಮುದಾಯ ಮೊಹರಂ ಆಚರಿಸಲು ಇರುವ ಕಾರಣಗಳಲ್ಲಿ ಈ ಕಥೆಯೂ ಒಂದೆನ್ನುತ್ತಾರೆ.
ಹೀಗೆ ಮೊಹರಂ ನಲ್ಲಿ ಮಕ್ಕಳು ಸಾಂಕೇತಿಕವಾಗಿಯೂ, ಸಹಜವಾಗಿಯೂ ಭಾಗಿಯಾಗುತ್ತಾರೆ. ಮೊಹರಂ ಹಬ್ಬದಲ್ಲಿ ಹುಸೇನನ ಮಕ್ಕಳ ತೊಟ್ಟಿಲನ್ನು ಇಟ್ಟಿರುತ್ತಾರೆ. ಈ ತೊಟ್ಟಿಲಿಗೆ ಮಕ್ಕಳನ್ನು ಹಾಕುವ ಆಚರಣೆಯೂ ಇದೆ. ಇನ್ನು ಕೆಲವೆಡೆ ಹಸೇನ್ ಹುಸೇನ್ ದೇವರುಗಳ ಜತೆ ಭೀಭಿ ಪಾತೀಮಳನ್ನೂ ಮಕ್ಕಳಾದ ಕಾಸಿಂಪೀರಾ, ಅಬ್ಬಾಸ್‌ಅಲಿ, ಮುಂತಾದ ಸಣ್ಣದೇವರು ಅಥವಾ ಕವಡೆ ಪೀರಾಗಳನ್ನು ಕೂರಿಸುವ ಪರಂಪರೆಯೂ ಇದೆ.
ಮೊಹರಂ ಹಬ್ಬದ ಪ್ರಯುಕ್ತ ಅಲೆಕುಣಿಗೆ ಗುದ್ದಲಿ ಹಾಕಲಾಗುತ್ತದೆ. ಬಹುಪಾಲು ಈ ಕುಣಿಗಳು ತಿರುಗಿದ ಪಿರಮಿಡ್ಡಿನ ಆಕಾರದಲ್ಲಿರುತ್ತವೆ. ಆಗ ಮಕ್ಕಳು ಇದರಲ್ಲಿ ಓಟ ಶುರು ಮಾಡಿಕೊಳ್ಳುತ್ತಾರೆ. ಓಡುವುದು, ಓಡುವವರನ್ನು ಎಳೆದು ಬೀಳಿಸುವುದು, ತಾವೂ ಬಿದ್ದು ಮೈಯೆಲ್ಲಾ ಬೂದಿ ಮಾಡಿಕೊಳ್ಳುವುದು ಹೀಗೆ ತುಂಬಾ ಲವಲವಿಕೆಯಿಂದ ಕೂಡಿರುತ್ತದೆ.

ಇನ್ನು ಮೊಹರಂ ಹಬ್ಬದ ಪ್ರಯುಕ್ತ ಲಾಡಿ (ಕೆಂಪು ಹಳದಿ ದಾರ)ಕಟ್ಟಿಸಿಕೊಳ್ಳುವ ಆಚರಣೆ ಇರುತ್ತದೆ. ಈ ಲಾಡಿಯನ್ನು ಕರುಳಿಗೆ ಹೋಲಿಸುವ ಕಥೆಗಳೂ ಇವೆ. ಸಾಮಾನ್ಯವಾಗಿ ಮಕ್ಕಳಿಗೆ ಲಾಡಿ ಕಟ್ಟಿಸುತ್ತಾರೆ. ಹೀಗೆ ಲಾಡಿ ಕಟ್ಟಿಸಿಕೊಂಡ ಮಕ್ಕಳು ಕನಿಷ್ಟ ಐದು ಮನೆಗಾದರೂ ಹೋಗಿ ಭಿಕ್ಷೆ ಬೇಡಬೇಕೆಂಬ ಪದ್ದತಿ ಎಲ್ಲಾ ಊರಿನಲ್ಲಿದೆ. ಆಗ ಮಕ್ಕಳು ಗುಂಪು ಕಟ್ಟಿಕೊಂಡು ಮನೆ ಮನೆಗೆ ಹೋಗಿ ‘ಎಮಲೋಮ್ ಎಮಲೋಮ್ ದುಯ್’ ಎನ್ನುವ ಮೂಲಕ ಭಿಕ್ಷೆ ಬೇಡುತ್ತಾರೆ. ಹೀಗೆ ಭಿಕ್ಷೆ ಬೇಡುವುದನ್ನು ಮಕ್ಕಳು ಆಟದಂತೆ ಸಂಭ್ರಮಿಸುತ್ತಾರೆ. ಮಕ್ಕಳು ಊರಾಡಿ ಬಂದ ಕಾಳಲ್ಲಿ ಕಡುಬು ಮಾಡುವುದು, ಅಥವಾ ಆ ಕಾಳನ್ನು ಅಂಗಡಿಯಲ್ಲಿ ಮಾರಿ ಸಕ್ಕರೆಯನ್ನೋ..ಬೆಲ್ಲವನ್ನೋ ಕೊಂಡು ಜನರಿಗೆ ಹಂಚುವುದು ಮಾಡುತ್ತಾರೆ. ಈ ಹಬ್ಬದಲ್ಲಿ ಹಾಕುವ ಸಿದ್ದಕಿ ಸಿದ್ದಿ, ಪೀರ, ಕಳ್ಳಳ್ಳಿ ಬುವ್ವ, ಕರಡಿ, ಹುಲಿ, ಮುಂತಾದ ವೇಷಗಳು ಕುಣಿಯುವಾಗ ಮಕ್ಕಳ ಹಿಂಡು ಕೇಕೆ ಹಾಕುತ್ತಲೂ, ಬೆರಗಿನಿಂದ, ಭಯದಿಂದ ವೀಕ್ಷಿಸುತ್ತಲೂ ನಲಿಡಾಡುತ್ತದೆ.
ಮಕ್ಕಳು ಅನಾರೋಗ್ಯಕ್ಕೆ ತುತ್ತಾದಾಗ, ಅವರು ಗುಣಮುಖವಾಗಲಿ ಎಂದು ಮೊಹರಂ ದೇವರುಗಳಲ್ಲಿ ಹರಕೆ ಹೋರುವ ಪದ್ದತಿಯೊಂದಿದೆ. ಈ ಹರಕೆಗಳು ನಾನಾ ವಿಧವಾಗಿವೆ. ಚಿಕ್ಕ ಮಕ್ಕಳಿಗೆ ಹುಲಿ ವೇಷ ಹಾಕಿಸುವುದಾಗಿಯೂ, ಮಕ್ಕಳ ತೂಕದಷ್ಟು ಬೆಲ್ಲ, ತೆಂಗಿನ ಕಾಯಿ ಕೊಡುವುದಾಗಿಯೂ, ಫಕೀರರನ್ನಾಗಿಸುವುದಾಗಿಯೂ ಪ್ರಾದೇಶಿಕವಾಗಿ ನಾನಾ ಹರಕೆಗಳಿರುತ್ತವೆ. ಈ ಹರಕೆ ತೀರಿಸಲು ಮಕ್ಕಳನ್ನು ಪುಟ್ಟ ಹುಲಿಗಳನ್ನಾಗಿಯೂ, ಫಕೀರರನ್ನಾಗಿಯೂ ಮಾಡುತ್ತಾರೆ. ಇದನ್ನು ಮಕ್ಕಳು ಆಟದಂತೆ ಸಂಭ್ರಮಿಸುತ್ತಾರೆ. ಹೀಗೆ ಮಕ್ಕಳ ಹರಕೆಯನ್ನು ತೀರಿಸುವುದೇ ಹೆಚ್ಚಿರುವ ಕಾರಣ ಮೊಹರಂ ಹಬ್ಬವೇ ಮಕ್ಕಳ
ಹಬ್ಬದಂತೆ ಗೋಚರಿಸುತ್ತದೆ.

ಮೊಹರಂ ಹಬ್ಬ ವಾರಗಟ್ಟಲೆ ಇರುವುದರಿಂದ, ಮಕ್ಕಳಲ್ಲಿ ಈ
ಹಬ್ಬದ ಅನುಕರಣೆಯೂ ನಡೆಯುತ್ತದೆ ಹಬ್ಬದ ನಂತರ ಮಕ್ಕಳು ಉದ್ದನೆಯ ಕೋಲಿಗೆ ಸೀರೆ ಉಡಿಸಿ, ರಟ್ಟಿನ ತುಂಡನ್ನು ಮುಖ ಮಾಡಿ, ಸ್ಲೇಟು, ತಟ್ಟೆಯನ್ನೆ ಹಲಗೆ ಮಾಡಿಕೊಂಡು ಬಾರಿಸುತ್ತಾ ಓಡಾಡುತ್ತಾರೆ. ಅದರಲ್ಲಿ ಕೆಲ ಮಕ್ಕಳು ದೇವರು ಬಂದಂತೆಯೂ, ಕೆಲವರು ಪೂಜಾರಿಗಳಂತೆಯೂ ನಟಿಸುತ್ತಾರೆ. ಹೀಗೆ ಬೇರೆ ಬೇರೆ ಓಣಿಯ ಮಕ್ಕಳು ತಮ್ಮ ತಮ್ಮ ದೇವರುಗಳನ್ನು ಒಂದೆಡೆ ತಂದು ಹಸೇನ್ ಹುಸೇನರನ್ನು ಬೇಟಿ ಮಾಡಿಸುವುದೂ ಇರುತ್ತದೆ. ಹೀಗೆ ಹಳ್ಳಿಗಳಲ್ಲಿ ಹಬ್ಬಗಳ ಅನುಕರಣೆಯನ್ನೇ ಆಟಗಳನ್ನಾಗಿಸಿ ಮಕ್ಕಳು ಆಡುವುದನ್ನು ನೋಡಬಹುದು.
ಮಕ್ಕಳು ಮೊಹರಂ ಹಬ್ಬದಲ್ಲಿ ಭಾಗವಹಿಸುವಿಕೆಯನ್ನು ನೋಡಿದರೆ, ಕುವೆಂಪು ಹೇಳುವಂತೆ ವಿಶ್ವಮಾನವರು ಎನ್ನುವ ಸಂದೇಶ ನೆನಪಾಗುತ್ತದೆ. ಹೀಗೆ ಧರ್ಮ ಜಾತಿಯ ಹಂಗು ತೊರೆದು ಒಂದಾಗುವ ಈ ಹಬ್ಬದಲ್ಲಿ ಮಕ್ಕಳು ಭಾಗವಹಿಸುವುದೂ, ಮಕ್ಕಳೇ ಹಬ್ಬ ಮಾಡುವುದೂ ನಿಜಕ್ಕೂ ಸಂಸ್ಕೃತಿಗಳು ಒಂದರೊಳಗೊಂದು ಬೆರೆಯುವಿಕೆಯನ್ನೂ ತೋರಿಸುತ್ತಿದೆ. ಇದು ನಾವುಗಳು ಹೇಳುವ ಸಾಮರಸ್ಯ ಎನ್ನುವ ಸವಕಲು ಪದದ ಅರ್ಥವನ್ನು ಮೀರಿದ ದ್ವನಿಯೊಂದನ್ನು ಕೇಳಿಸುತ್ತದೆ. ಹೀಗೆ ಮೊಹರಂ ಆಚರಣೆ ಮಕ್ಕಳ ಹಬ್ಬವಾಗಿ ತನಗೆ ತಾನೆ ಜಾತಿ ಮತ ಧರ್ಮದ ಆಚೆ ನಿಲ್ಲುತ್ತದೆ. ನಮ್ಮ ಹಳ್ಳಿಗಳ ಜಾತ್ರೆಗಳಲ್ಲಿಯೂ ಹಿರಿಯ ದಲಿತರು ಊರಂಗಳವನ್ನು ಕಸ ಗುಡಿಸುತ್ತಾ ಜಾತಿ ಶ್ರೇಣೀಕರಣದ ಸಾಕ್ಷ್ಯಗಳಂತೆ ಕಂಡರೆ, ಅವರ ಮಕ್ಕಳು ಎಲ್ಲಾ ಮಕ್ಕಳೊಂದಿಗೆ ಜಾತ್ರೆಯಲ್ಲಿ ನಿರಾತಂಕವಾಗಿ ಭಾಗವಹಿಸುವಿಕೆ ಜಾತಿಯಾಚೆಗೆ ನಿಲ್ಲುತ್ತದೆ. ಹೀಗೆ ಆಚರಣೆಗಳನ್ನು ಮಕ್ಕಳ ನೆಲೆಯಲ್ಲಿ ಮರು ಅಧ್ಯಯನಕ್ಕೆ ಒಳಪಡಿಸುವ ಅಗತ್ಯವಿದ್ದಂತೆ ಕಾಣುತ್ತದೆ.ಮಕ್ಕಳು 'ದೇವರ ತೋಟದ ಹೂವುಗಳಿದ್ದಂತೆ' ಎಂಬ ಕವಿವಾಣೆಯಂತೆ ಅವರ ಮನದಾಳದಲ್ಲಿ ಮೇಲ್ಜಾತಿ ಕೆಳಜಾತಿ ಅನ್ನುವ ಭಾವನೆ ಇರುವುದಿಲ್ಲ.    ಎಲ್ಲಾ ಉತ್ಸವಗಳನ್ನು ಗ್ರಾಮಸ್ಥರೆಲ್ಲರೂ ಇದೆ ಸಹೋದರತ್ವ ಭಾವದಲ್ಲಿ ಸೇರಿ ಆಚರಿಸಿದರೆ ಅರ್ಥಪೂರ್ಣವಾಗುತ್ತದೆ.

ಧನ್ಯವಾದಗಳು

ಪೋತರಾಜ.ಪಿ.

Wednesday, 21 October 2015

ಸಂಬಂಧ ಬೆಸೆಯುವ ಬನ್ನಿ ಹಬ್ಬ

ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ ಹಬ್ಬವು ಹಳಸಿದ ಸಂಬಂಧಗಳನ್ನು ಬೆಸೆಯುತ್ತದೆ. ಅಲ್ಲದೆ ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ. ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ನಡೆದ ಪವಿತ್ರ ದಿನ, ಪಾಂಡವರು ಅಜ್ಞಾತವಾಸ ಮುಗಿಸಿದ ಪವಿತ್ರ ದಿನವೆಂದು ಐತಿಹ್ಯಗಳು ಹೇಳುತ್ತವೆ. ಪಾಂಡವರು ಅಜ್ಞಾತವಾಸ ಹೋಗುವಾಗ ಕಾಡಿನಲ್ಲಿರುವ ಬನ್ನಿಗಿಡದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಕಟ್ಟಿ, ಅಜ್ಞಾತವಾಸ ಮುಗಿಸಿದಾಗ ಬನ್ನಿ ಗಿಡವನ್ನು ಪೂಜಿಸಿ, ಶಸ್ತ್ರಾಸ್ತ್ರಗಳನ್ನು ಬಿಡಿಸಿಕೊಂಡ ಪವಿತ್ರ ದಿನವೆಂದು ಹೇಳುತ್ತಾರೆ.
ವಿಜಯದಶಮಿಯಂದು ಬೆಳೆಸು ತುಂಬಿದ ಭೂಮಿ, ಕಾಡನ್ನು ಬಿಟ್ಟು ಊರನ್ನು ಸೇರುವುದೆಂದು ಕೃಷಿಕರು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೃಷಿಕರು ಹಾಗೂ ವ್ಯಾಪಾರಿಗಳು ಆಯುಧಗಳನ್ನು ಪೂಜಿಸಿ, ಬನ್ನಿ ಸಸಿಯನ್ನು ನೆಟ್ಟು, ನಂತರ ಮುಡಿಯುವ ಪದ್ಧತಿ ಬಂದಿದೆ ಎಂದು ಹೇಳುತ್ತಾರೆ. ಪಾಂಡವರಿಗೆ ಸಂಬಂಧಿಸಿದ ಜನಪದ ಹಾಡು ವಿವರಿಸುವುದು ಹೀಗೆ “ಕಲ್ಲು ಕಡುಬು ಮಾಡಿ, ಮುಳ್ಳು ಸಾವಿಗೆ ಮಾಡಿ, ಬನ್ನಿಯ ಎಲಿಯಾಗೆ ಎಡೆಮಾಡಿ, ಪಾಂಡವರು, ಉಂಡು ಹೋಗ್ಯಾರೊ ವನವಾಸೊ” ಅಂದು ಮಕ್ಕಳು ತಾಯಂದಿರಿಗೆ ಬನ್ನಿ ಮುಡಿಸುವುದರ ಮೂಲಕ ಹಾಗೂ ಹೆಂಡತಿ ಗಂಡನಿಗೆ ಬನ್ನಿ ಮುಡಿಸುವುದರ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.
ರಾಮಾಯಣ ಹಾಗೂ ಮಹಾಭಾರತದ ಎರಡು ಪ್ರಮುಖ ಘಟನಾವಳಿಗಳಿಗೆ ವಿಜಯದಶಮಿ ಸಾಕ್ಷಿಯಾಗಿ, ಮನುಷ್ಯರಲ್ಲಿನ ದುರ್ಗುಣಗಳ ಸಂಹಾರದ ದ್ಯೋತಕವಾಗಿದೆ. ಶಾಕ್ತೇಯರಿಂದ ‘ಅಪರಂಜಿತಾ’ ಎಂದು ಪೂಜೆಗೊಳ್ಳುತ್ತಿದ್ದ ಬನ್ನಿರಾಮಾಯಣ, ಮಹಾಭಾರತದ ಸಂದರ್ಭದಲ್ಲಿ ಮಾನ್ಯತೆ ಪಡೆದಿತ್ತು. ಶ್ರೀ ರಾಮಚಂದ್ರನು ಶಮಿವೃಕ್ಷವನ್ನು ಪೂಜಿಸಿ, ರಾವಣನ ಮೇಲೆ ಯುದ್ಧಕ್ಕೆ ಹೋದನೆಂದು, ವಿರಾಟನ ಗೋಗ್ರಹಣದ ಸಂದರ್ಭದಲ್ಲಿಯು ಅರ್ಜುನನು ಶಮಿದೇವಿಯನ್ನು ಆರಾಧಿಸಿದನೆಂಬ ಉಲ್ಲೇಖಗಳು ಜನಪದ ಮಹಾಕಾವ್ಯಗಳಲ್ಲಿವೆ.
ಪೌರಾಣಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಮಹತ್ವದ ಸ್ಥಾನ ಪಡೆದ ಬನ್ನಿಯು ವಿಜಯದ ಸಂಕೇತವಾಗಿ, ಸಂಬಂಧಗಳನ್ನು ಬೆಸೆಯುವ ಸಾಧನವಾಗಿದೆ. ಬನ್ನಿಯ ಮರವನ್ನು ಉರುವಲಾಗಿ ಉಪಯೋಗಿಸುವುದಿಲ್ಲ. ಹಾಗೆಯೆ ಗಿಡವನ್ನು ವ್ಯಾಪಾರ ಮಾಡುವುದಿಲ್ಲ.ಧಾರ್ಮಿಕವಾಗಿ ಬನ್ನಿ ಮರ ಪವಿತ್ರ ಸ್ಥಾನದಲ್ಲಿದೆ.

ಬನ್ನಿ ಮುಡಿಯುವ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತುಗಳಿವು ↓
" ಬಂಗಾರ ಕೊಟ್ಟು ಬಂಗಾರದ್ಹಾಂಗ ಇರೋಣ್ರಿ... ಕೈ ಹಿಡೀರಿ, ಉಡಿ ಒಡ್ಡರೀ... ಸಾಕು ಅನ್ನುವಷ್ಟು ಬಂಗಾರ ಕೊಡ್ತೀವಿ... ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕಾಗಾಂಗಿಲ್ಲ ನಿಮ್ಮ ಮನಿತನಕ ನೀವು ಹೇಳ್ದ ಕೇಳ್ದ ಬಂಗಾರ ತಂದೀವಿ... ಎಷ್ಟು ಬೇಕು ಅಷ್ಟು ತುಗೊಳ್ರಿ..."

ದಸರಾ ಹಬ್ಬದ ಶುಭಾಶಯಗಳು